ಸರಗೂರು ಕ್ಷೇತ್ರ
ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಬಿ.ಜಿ.ಪುರ ಹೋಬಳಿಯ ಸರಗೂರು ಗ್ರಾಮವು ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಶರಣರು ಜನಿಸಿದ ಪುಣ್ಯಭೂಮಿಯಾಗಿದೆ. ಈಶಾನ್ಯ ದಿಕ್ಕಿಗೆ ಐದು ಕಿಲೋಮೀಟರ್ ದೂರದಲ್ಲಿರುವ ಕುಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ, ದಕ್ಷಿಣ ದಿಕ್ಕಿನಲ್ಲಿ ಮೂರು ಕಿಲೋಮೀಟರ್ ದೂರದಲ್ಲಿರುವ ಮುಡುಕುತೊರೆಯ ಶ್ರೀ ಭ್ರಮರಾಂಬಾ ಸಹಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಗಜಾರಣ್ಯ ಕ್ಷೇತ್ರ ಹಾಗೂ ವಾಯವ್ಯ ದಿಕ್ಕಿನಲ್ಲಿ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಶ್ರೀ ವಡ್ಗಲ್ ರಂಗನಾಥಸ್ವಾಮಿ ಕ್ಷೇತ್ರಗಳ ಮಧ್ಯೆ ಇರುವ ಇತಿಹಾಸವುಳ್ಳ ಕ್ಷೇತ್ರ ಇದಾಗಿದೆ.
ಮೂಲಪುರುಷರು: ಶ್ರೀ ಸರಗೂರಪ್ಪ ಮತ್ತು ಗೌರಮ್ಮ
ಇತಿಹಾಸದ ಪ್ರಕಾರ ಶಾಪಕ್ಕೆ ಗುರಿಯಾಗಿದ್ದ, ಮೂಲತಃ ವೈಷ್ಣವರಾಗಿದ್ದ ಶ್ರೀ ಸರಗೂರಪ್ಪ ಮತ್ತು ಗೌರಮ್ಮ ದಂಪತಿಗಳು ಶಾಪವಿಮೋಚನೆಗಾಗಿ ಶ್ರೀ ಪರಶಿವನಿಂದ ಅನುಗ್ರಹ ಪಡೆದು ಭೂಲೋಕದ ಸರಗೂರಿನಲ್ಲಿ ಜನ್ಮತಾಳಿದರೆಂದು ತಿಳಿಯುತ್ತದೆ.
ಸರಗೂರು ಗ್ರಾಮದ ಮೂಲಪುರುಷರಾದ ಶ್ರೀ ಸರಗೂರಪ್ಪ ಮತ್ತು ಗೌರಮ್ಮನವರ ಕಾಲ ಇಂದಿಗೂ ಸ್ಪಷ್ಟವಾಗಿಲ್ಲ; ಆದರೆ ಇತಿಹಾಸದ ಪ್ರಕಾರ ಅದು ಶ್ರೀ ಮಲೆಮಹದೇಶ್ವರರು ಇದ್ದ ಕಾಲವೆಂಬುದು ತಿಳಿಯುತ್ತದೆ.
ಶ್ರೀ ಮೂಗಪ್ಪ – ನಿಜಗುಣ, ಶಂಕರಪ್ರಿಯ
ದಂಪತಿಗಳಿಗೆ ಒಟ್ಟು ಏಳು ಜನ ಗಂಡು ಮಕ್ಕಳಿದ್ದು, ಅವರಲ್ಲಿ ಕೊನೆಯ ಮಗನಾದವರೇ ದೈವಾಂಶ ಸಂಭೂತರಾದ ಶ್ರೀ ಮೂಗಪ್ಪ. ಇತಿಹಾಸದ ಪ್ರಕಾರ ಇವರು ಹುಟ್ಟುವಾಗಲೇ ಎದೆಯಲ್ಲಿ ದಿವ್ಯ ಪಂಚಕಳಸದೊಂದಿಗೆ ಜನ್ಮವೆತ್ತಿದರು. ಮಾತಿನಲ್ಲಿ ಮಿತವಾಗಿದ್ದರಿಂದ ಮೂಗಪ್ಪ, ಗುಣದಲ್ಲಿ ನಿಜವುಳ್ಳವರಾಗಿದ್ದರಿಂದ ನಿಜಗುಣ, ಪರಶಿವನಿಗೆ ಪ್ರಿಯವಾದ ಭಕ್ತರಾದ್ದರಿಂದ ಶಂಕರಪ್ರಿಯ ಎಂಬ ಹೆಸರುಗಳು ಇವರಿಗಿದ್ದದ್ದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ಇವರು ವೈಷ್ಣವರಾಗಿ ಶ್ರೀ ಬಿಳಿಗಿರಿ ರಂಗಸ್ವಾಮಿಯನ್ನು ಪೂಜಿಸುತ್ತಿದ್ದರು. ಇವರ ಭಕ್ತಿಯಿಂದ ಪ್ರೇರಿತರಾಗಿ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರೂ ಇವರನ್ನು ಒಕ್ಕಲು ಪಡೆದು ಪೂಜೆಗೊಳ್ಳುತ್ತಿದ್ದರೆಂಬ ಉಲ್ಲೇಖವಿದೆ. ಹೀಗೆ ವೈಷ್ಣವ ಮತ್ತು ಶೈವ ಎರಡೂ ಪರಂಪರೆಯ ದೇವರುಗಳನ್ನು ಪೂಜಿಸುತ್ತಿದ್ದ ಏಕಮಾತ್ರ ಭಕ್ತರು ಇವರಾಗಿದ್ದರು.
ಭೂಮಿ ತೂಕದ ಮೂಗಪ್ಪ
ಇವರ ಭಕ್ತಿಯನ್ನು ಮೆಚ್ಚಿದ ಶ್ರೀ ಮಲೆಮಹದೇಶ್ವರ ಸ್ವಾಮಿಯವರು ಇವರನ್ನು ತಮ್ಮ ಎಣ್ಣೆಮಜ್ಜನಕ್ಕೆ ಒಕ್ಕಲು ಪಡೆಯಲು ಸಂಕಲ್ಪ ಮಾಡಿದರು. ಸರಗೂರಿಗೆ ಬರುವ ಮುನ್ನ ತಲಕಾಡಿನ ಬಳಿ ಇವರ ಭಕ್ತಿಯನ್ನು ಮತ್ತೊಮ್ಮೆ ಪರೀಕ್ಷಿಸಲು, ಇಡೀ ಭೂಮಿಯನ್ನು ತಕ್ಕಡಿಯ ಒಂದು ಭಾಗಕ್ಕೂ ಶ್ರೀ ಮೂಗಪ್ಪನವರನ್ನು ಮತ್ತೊಂದು ಭಾಗಕ್ಕೂ ಇಟ್ಟು ತೂಕ ಮಾಡಿ ನೋಡಿದಾಗ, ಭೂಮಿಗಿಂತಲೂ ಮೂಗಪ್ಪನವರೇ ತುಸು ಭಾರವಿದ್ದರು. ಆದ್ದರಿಂದ ಶ್ರೀ ಮಹದೇಶ್ವರ ಸ್ವಾಮಿಯವರು ಅವರನ್ನು “ಭೂಮಿ ತೂಕದ ಮೂಗಪ್ಪ” ಎಂದು ಕರೆದರೆಂದು ಜಾನಪದ ಸಾಹಿತ್ಯ ಹೇಳುತ್ತದೆ.
ಸತ್ಯಕ್ಕೆ ಸರಗೂರು ಮಠ,
ನಿಜಕ್ಕೆ ಬೊಪ್ಪೇಗೌಡನಪುರ– ಜಾನಪದ ಹಾಡುಗಾರರ ಬಾಯಲ್ಲಿ ಇಂದಿಗೂ ಕೇಳಿಬರುವ ನುಡಿ
ಹಾಗಾಗಿ ಈ ಹುಟ್ಟು ಲಿಂಗವಂತರನ್ನು – ಅಂದರೆ ಹುಟ್ಟುವಾಗಲೇ ಎದೆಯಲ್ಲಿ ದಿವ್ಯ ಪಂಚಕಳಸವನ್ನು ಹೊಂದಿದ್ದ (ಕಟ್ಟು ಲಿಂಗಧಾರಣೆ ಬೇರೆ) ಇವರನ್ನು – ಹೇಗಾದರೂ ಮಾಡಿ ಒಕ್ಕಲು ಪಡೆಯಬೇಕೆಂದು ಶ್ರೀ ಮಹದೇಶ್ವರರು ಹೇಳಿದ್ದು ಜಾನಪದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ.
ಎಣ್ಣೆಮಜ್ಜನ ಸೇವೆಗೆ ಒಕ್ಕಲು
ಶ್ರೀ ಮಹದೇಶ್ವರರ ಅನುಗ್ರಹದಿಂದ ಶ್ರೀ ಮೂಗಪ್ಪನವರು ಕೊತ್ತೇಗಾಲ ಗ್ರಾಮದ ಶ್ರೀ ದಾಸಪ್ಪ ಮತ್ತು ಬಲ್ಲಮ್ಮ ದಂಪತಿಗಳ ಸುಪುತ್ರಿಯಾದ ಶಿವಶರಣೆ ರಾಮವ್ವನವರನ್ನು ವಿವಾಹವಾದರು. ನಂತರ ಶ್ರೀ ಮಹದೇಶ್ವರ ಸ್ವಾಮಿಯವರು ಸರಗೂರಪ್ಪನವರ ಕುಟುಂಬವನ್ನು ವಿಭಾಗ ಮಾಡಿ, ಶ್ರೀ ಮೂಗಪ್ಪ–ರಾಮವ್ವರವರನ್ನು ಒಕ್ಕಲು ಪಡೆಯಲು ಅವರ ಸಂಸಾರದೊಳಗಿನ ಚಟುವಟಿಕೆಗಳನ್ನು ಖುದ್ದಾಗಿ ಗಮನಿಸಲು, ಸ್ವತಃ ಸುಣ್ಣದ ಗೋಡೆಯ ಮೇಲೆ ಬಿಳಿ ಹಲ್ಲಿಯಾಗಿ ವಾರಾನುಗಟ್ಟಲೆ ವಾಸಮಾಡಿದರೆಂಬ ಉಲ್ಲೇಖವಿದೆ.
ಶ್ರೀ ಮಹದೇಶ್ವರರ ಸ್ವತಃ ವರ್ಣನೆಯಂತೆ ಬೆಳ್ಳಿ ಬಾಗಿಲು, ಚಿನ್ನದ ಕಂಬ, ವಜ್ರದ ತೊಲೆಯಂತಹ ತೊಟ್ಟಿಮನೆಯ ಸಂಸಾರವನ್ನು ಅವರು ಇಬ್ಭಾಗ ಮಾಡಿ, ಶ್ರೀ ರಾಮವ್ವ–ಮೂಗಪ್ಪರವರನ್ನು ತಮ್ಮ ಎಣ್ಣೆಮಜ್ಜನಕ್ಕೆ ಒಕ್ಕಲು ಪಡೆಯಲು ನಿರ್ಧರಿಸಿದರು. ಅವರು ಒಪ್ಪಲು ತಕರಾರು ಇದ್ದುದರಿಂದ ಶ್ರೀ ಮುಡುಕುತೊರೆ ಮಲ್ಲಪ್ಪ ಹಾಗೂ ಬಿಳಿಗಿರಿರಂಗಸ್ವಾಮಿಯವರನ್ನು ಖುದ್ದು ಕರೆತಂದು ಸಂಧಾನ ಮಾಡಿದರೂ ವಿಫಲರಾದರು.
ನಂತರ ಅವರನ್ನು ಕಷ್ಟಕ್ಕೆ ಗುರಿಮಾಡಿ, ತಿನ್ನಲೂ ಪರಿತಪಿಸುವಾಗ, ಮನೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಇದ್ದ ರಾಗಿ ಅಂಬಲಿಯನ್ನೂ ಶ್ರೀ ಮುಡುಕುತೊರೆ ಮಲ್ಲಪ್ಪ, ಬಿಳಿಗಿರಿರಂಗಸ್ವಾಮಿ, ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ, ಮೇಲುಕೋಟೆ ಚಲುವನಾರಾಯಣಸ್ವಾಮಿ ಮತ್ತು ರಾಡುಬಾಗಿಲ ಪರಶುರಾಮರೊಡಗೂಡಿ ಕುಡಿದು ಖಾಲಿ ಮಾಡಿದ ಪ್ರಸಂಗವೂ ಜಾನಪದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ.
ಕೊನೆಗೆ ಅವರನ್ನು ಒಕ್ಕಲು ಪಡೆದಾಗ, ರಾಮವ್ವ ತಾಯಿಯು “ನಮ್ಮ ಮೂಗಪ್ಪನವರನ್ನು ಒಬ್ಬರನ್ನೇ ನಿಮ್ಮ ಸೇವೆಗೆ ಕಳಿಸಲಾರೆ; ನಾನೂ ಜೊತೆಯಲ್ಲಿ ಏಳುಮಲೆ ಕೈಲಾಸಕ್ಕೆ ಬರುವುದಾದರೆ ಮಾತ್ರ” ಎಂದು ಹಠಮಾಡಿದರು. ಆಗ ಶ್ರೀ ಮಹದೇಶ್ವರರು “ಸರಿ ತಾಯಿ, ನಿನ್ನಿಂದ ನನ್ನ ಏಳುಮಲೆಗೆ ಹೆಣ್ಣುಮಕ್ಕಳು ಬರುವಂತಾಗಲಿ” ಎಂದು ಹರಸಿ, ಇಬ್ಬರನ್ನೂ ತಮ್ಮ ಎಣ್ಣೆಮಜ್ಜನ ಸೇವೆಗೆ ಒಕ್ಕಲಾಗಿ ಪಡೆದರು. ಇಂದು ಎಲ್ಲಾ ಭಕ್ತರು ಸಂಸಾರ ಸಮೇತ ಶ್ರೀ ಮಹದೇಶ್ವರ ಸ್ವಾಮಿಯವರ ಸಹಜ ದರ್ಶನ ಪಡೆಯಲು ಕಾರಣೀಭೂತರಾದ ಈ ದಂಪತಿಗಳು, ಶ್ರೀ ಕ್ಷೇತ್ರದ ಇಂದಿನ ಏಳಿಗೆಗೆ ಅಡಿಪಾಯ ಹಾಕಿದ್ದಾರೆ.
ಎಲ್ಲ ಸಮುದಾಯಗಳ ಸೇವೆ
ಇವರು ಎಲ್ಲಾ ಭಕ್ತರನ್ನು ಯಾವುದೇ ಭೇದಭಾವವಿಲ್ಲದೆ ಕಂಡವರು –
ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ॥
ಎಂಬ ಮಾತಿನಂತೆ ಹಲವು ಊರುಗಳ, ಹಲವು ಸಮುದಾಯಗಳ ಸೇವೆಗಳು ಪಲ್ಲಕ್ಕಿಯ ಮೆರವಣಿಗೆಯಲ್ಲಿ ಜೊತೆಯಾಗಿ ಸಾಗುತ್ತಿದ್ದುದು ಜನರ ಬಾಯಲ್ಲಿ ಹಾಸುಹೊಕ್ಕಾಗಿದೆ:
- ಸಿದ್ದಯ್ಯನಪುರದ ಕಡ್ಡಿ ಚಾಮರ
- ಬೆಸ್ತರ ಶಿಳ್ಳೆಕ್ಯಾತ
- ಅಮಚವಾಡಿಯ ವಾದ್ಯ
- ಗೂಳ್ಯದೊಡ್ಡಿ ಸುಬ್ಬೇಗೌಡರು
- ಅರಕೆರೆ–ಬನ್ನೂರು ಭಾಗದ ಒಕ್ಕಲಿಗ ಸಮುದಾಯ
- ತಲಕಾಡಿನ ಬಸ್ತಿಕೇರಿ ಧೂಪ
- ಯಳಂದೂರಿನ ಹೊಂಬಾಳೆ
- ಮಾಲಂಗಿಯ ಹನ್ನೆರಡು ಪಾವು ಎಳ್ಳು
ಶಾಸನಗಳಲ್ಲಿ ಉಲ್ಲೇಖ
1246ನೇ ಇಸವಿಯ ವೀರಬಲ್ಲಾಳರ ತಾಮ್ರ ಶಾಸನ ಹಾಗೂ ಬಹದ್ದೂರ್ ಹೈದರಾಲಿ ಖಾನ್ರವರ ತಾಮ್ರ ಶಾಸನದಲ್ಲೂ ಇವರ ಉಲ್ಲೇಖವಿದ್ದು, ಮೈಸೂರು ಅರಸರಿಂದ ಬೆಳ್ಳಿ ದವಾಲಿ ಪಡೆದ ಉಲ್ಲೇಖವಿರುವ ಶರಣರು ಇವರಾಗಿದ್ದಾರೆ.
ಆಧಾರ: Annual Report of the Mysore Archaeological Department, 1930 – ವೀರಬಲ್ಲಾಳರ ತಾಮ್ರ ಶಾಸನ ಹಾಗೂ ಮಹದೇಶ್ವರ ಬೆಟ್ಟದ ಉಲ್ಲೇಖ, ಮುದ್ರಿತ ಪುಟ 140–142. ಆ ಪುಟವನ್ನು ತೆರೆಯಿರಿ →
ಶ್ರೀ ಮಹದೇಶ್ವರರು ತಮ್ಮ ದೂರದೃಷ್ಟಿಯಿಂದ ತಮ್ಮ ಗುಡಿಗೆ ಪಶ್ಚಿಮದ ಬಾಗಿಲನ್ನು ನಿರ್ಮಿಸಿದ್ದೂ ಶ್ರೀ ರಾಮವ್ವ ಮತ್ತು ಮೂಗಪ್ಪರವರ ಪಡವಲು ಪರೀಕ್ಷೆಯನ್ನು ಕಣ್ಣಾರೆ ಕಾಣಲು ಎಂಬುದು, ಆಲಂಬಾಡಿ ಜುಂಜೇಗೌಡರು ದೇವಾಲಯ ನಿರ್ಮಾಣ ಮಾಡುವ ಸನ್ನಿವೇಶದಲ್ಲಿ ಬರುತ್ತದೆ.
ಗದ್ದುಗೆಗಳು, ಕೊಳಗಳು ಮತ್ತು ಜೀರ್ಣೋದ್ಧಾರ
ಎಣ್ಣೆಮಜ್ಜನದ ನಂತರ ಹುಲಿವಾಹನ ಉತ್ಸವ, ಹಾಲರವಿ, ರಥೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದ ಶರಣರ ಗದ್ದುಗೆಗಳು ಸರಗೂರಿನಲ್ಲಿದ್ದು, ಇಂದಿಗೂ ಎಲ್ಲಾ ಸಮುದಾಯದ ಭಕ್ತರಿಂದ ನಿತ್ಯಪೂಜೆಗೊಳ್ಳುತ್ತಿವೆ. ಶ್ರೀ ಮೂಗಪ್ಪ–ರಾಮವ್ವ ಅವರ ನಂತರದ ದೊಡ್ಡದಾಸಪ್ಪ ಬೃಂದಾವನ ಹಾಗೂ ಸಿದ್ದೇಶ್ವರ ಸ್ವಾಮಿಯವರ ದೇವಾಲಯಗಳು ಮುಖ್ಯವಾದವುಗಳಾಗಿವೆ.
ಸರಗೂರಿನಲ್ಲಿ ಶ್ರೀ ಮೂಗಪ್ಪ–ರಾಮವ್ವ ತಾಯಿಯವರು ವಾಸವಿದ್ದ ಮನೆಯ ಎದುರುಗಡೆ, ಶ್ರೀ ಮಹದೇಶ್ವರ ಸ್ವಾಮಿಗೆ ಪ್ರಪ್ರಥಮವಾಗಿ ಎಣ್ಣೆಮಜ್ಜನ ಮಾಡಲು ನಿರ್ಮಿಸಿದ್ದ ಮಜ್ಜನದ ಕೊಳವಿದೆ. ಜೊತೆಗೆ ಸರಗೂರಿನ ರಾಮವ್ವ ಕೊಳ, ಮೂಗಪ್ಪನವರ ಕೊಳ, ಮಹದೇಶ್ವರ ಬೆಟ್ಟದ ರಂಗನ ಒಡ್ಡುವಿನ ಬಳಿಯ ರಾಮವ್ವ ಕೊಳ ಮತ್ತು ಶ್ರೀ ಕ್ಷೇತ್ರದಲ್ಲಿ ಎಣ್ಣೆಮಜ್ಜನ ಪ್ರಸಾದ ವಿತರಿಸುವ ಗದ್ದುಗೆಗಳಿವೆ.
ಇವುಗಳನ್ನು ಜೀರ್ಣೋದ್ಧಾರ ಮಾಡಿ, ಇಂದಿನ ಹಾಗೂ ಮುಂಬರುವ ಪೀಳಿಗೆಯವರಿಗೆ ಈ ಇತಿಹಾಸವನ್ನು ತಿಳಿಸುವುದು ಶ್ರೀಮಠದ ಮುಖ್ಯ ಸಂಕಲ್ಪವಾಗಿದೆ.
ಈ ಇತಿಹಾಸದ ಮೂಲ ಬರಹವನ್ನು PDF ರೂಪದಲ್ಲಿ ಓದಲು: ಅಯ್ಯನ ಸರಗೂರು ಮಠದ ಇತಿಹಾಸ (PDF) · ಇನ್ನಷ್ಟು ಆಧಾರಗಳಿಗೆ ಗ್ರಂಥ ಭಂಡಾರ ನೋಡಿ.
